ಒಂದು ಭಾಷೆಯ ವ್ಯಾಕರಣವನ್ನು, ನಾವು ಬಳಸುವ ತಾತ್ವಿಕ ನೆಲೆಗಳು
ಮತ್ತು ಆರಿಸಿಕೊಳ್ಳುವ ಭಾಷಾಮಾದರಿಗಳನ್ನು ಅವಲಂಬಿಸಿ ಬೇರೆ ಬೇರೆ ಬಗೆಗಳಲ್ಲಿ ಕಟ್ಟಬಹುದು. ಆದರೆ,
ಆ ಭಾಷೆಯ ಚಾರಿತ್ರಿಕವಾದ ಬೆಳವಣಿಗೆಯ ಮರುರಚನೆ ಮಾಡುವುದು ಮತ್ತು ಅದನ್ನು ಅದರ ಸಂಗಡಿಗ ಭಾಷೆಗಳೊಂದಿಗೆ(ಜ್ಞಾತಿ
ಭಾಷೆಗಳು) ಹೋಲಿಸುವುದರಿಂದ, ವಾಸ್ತವಕ್ಕೆ ಹತ್ತಿರವಾದ ಚಿತ್ರಣವನ್ನು ಕೊಡಲು ಸಾಧ್ಯ. ಬಹಳ ಗೌರವವನ್ನು
ಪಡೆದಿರುವ, ಕೇಶಿರಾಜನ ‘ಶಬ್ದಮಣಿದರ್ಪಣ’ವೂ ಸೇರಿದಂತೆ, ಪ್ರಾಚೀನ ಕನ್ನಡ ವ್ಯಾಕರಣಗಳೆಲ್ಲವೂ ಸಂಸ್ಕೃತ ವ್ಯಾಕರಣಗಳು
ಹಾಗೂ ಅವುಗಳ ಹಿಂದೆ ಇರುವ ನಿರೂಪಣೆಯ ಮಾದರಿಗಳಿಂದ ತೀವ್ರವಾಗಿ ಪ್ರಭಾವಿತವಾಗಿವೆ. ತಾವು ಮಾಡಿಕೊಂಡ
ಈ ಆಯ್ಕೆಗಳ ಪರಿಣಾಮವಾದ ಬಿಕ್ಕಟ್ಟುಗಳಿಂದ, ಅವು ಕಷ್ಟಪಟ್ಟಿವೆ.
ಅದೇ ರೀತಿಯಲ್ಲಿ ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ರಚಿತವಾದ ಕೆಲವು ವ್ಯಾಕರಣಗಳು, ಮೂಲತಃ ಇಂಡೋಯೂರೋಪಿಯನ್
ಭಾಷೆಗಳಾದ ಲ್ಯಾಟಿನ್ ಮತ್ತು ಇಂಗ್ಲಿಷ್ ಭಾಷೆಗಳ ಮಾದರಿಗಳನ್ನು ಅನುಸರಿಸಿವೆ. ಕನ್ನಡದಲ್ಲಿರುವ ಅಪಾರವಾದ
ಸಂಸ್ಕೃತ ಪದಗಳು, ಈ ಭಾಷೆಯು ಸಂಸ್ಕೃತದಿಂದಲೇ ಹುಟ್ಟಿದೆಯೆಂಬ ತಪ್ಪು ತಿಳಿವಳಿಕೆಗೆ ಎಡೆಮಾಡಿದ್ದವು.
ಭಾರತೀಯ ಸಮಾಜದಲ್ಲಿ ಬೇರುಬಿಟ್ಟಿರುವ ಯಾಜಮಾನ್ಯದ ಸಂಬಂಧಗಳು ಈ ನಂಬಿಕೆಯು ಇನ್ನಷ್ಟು ಗಟ್ಟಿಯಾಗಲು
ಕಾರಣವಾದವು.
ಕನ್ನಡವು ದ್ರಾವಿಡಭಾಷೆಗಳ ಕುಟುಂಬಕ್ಕೆ ಸೇರಿದೆಯೆಂಬ ಮತ್ತು
ಸಂಸ್ಕೃತದೊಂದಿಗಿನ ಅದರ ಸಂಬಂಧವು ಕೇವಲ ಐತಿಹಾಸಿಕವೆಂಬ ಸಂಗತಿಯು,
ಈಗ ಅನುಮಾನವಿಲ್ಲದಂತೆ ನೆಲೆನಿಂತಿದೆ. ಆದ್ದರಿಂದ ಕನ್ನಡ ವ್ಯಾಕರಣವನ್ನು ಬರೆಯುವಾಗ, ಅದರ ದ್ರಾವಿಡಮೂಲಗಳನ್ನು ಪರಿಶೀಲಿಸುವುದು ಅನಿವಾರ್ಯವಾಗಿದೆ.
ಈ ಮಾತು ವರ್ಣಾನಾತ್ಮಕ ವ್ಯಾಕರಣ ಮತ್ತು ಐತಿಹಾಸಿಕ ವ್ಯಾಕರಣಗಳೆರಡರ ವಿಷಯದಲ್ಲಿಯೂ ನಿಜ. ಕನ್ನಡವನ್ನು
ಅದರ ಸಂಗಡಿಗ ಭಾಷೆಗಳಾದ ತಮಿಳು, ತೆಲುಗು, ಮಲೆಯಾಳಂ. ತುಳು ಮುಂತಾದ ಪ್ರಮುಖ ದ್ರಾವಿಡ ಭಾಷೆಗಳು ಮಾತ್ರವಲ್ಲದೆ,
ತಮ್ಮೊಳಗೆ ಮೂಲದ್ರಾವಿಡ ರಚನೆ-ರೂಪಗಳನ್ನು ಅಡಗಿಸಿಕೊಂಡಿರುವ ಚಿಕ್ಕಪುಟ್ಟ ಭಾಷೆಗಳು ಮತ್ತು ಉಪಭಾಷೆಗಳೊಂದಿಗೆ
ಹೋಲಿಸಬೇಕಾಗಿದೆ. ವಾಸ್ತವವಾಗಿ, ಹವ್ಯಕ ಕನ್ನಡ, ಗೌಡ
ಕನ್ನಡ ಮುಂತಾದ ಕನ್ನಡದ ಉಪಭಾಷೆಗಳು ಮೂಲರೂಪಗಳನ್ನು ಹೆಚ್ಚು ನಿಷ್ಠೆಯಿಂದ ಕಾಪಾಡಿಕೊಂಡಿವೆ. ಆದರೆ,
ಕನ್ನಡ ಭಾಷೆಯ ಶಿಕ್ಷಣಕ್ರಮವು, ಸಂಸ್ಕೃತ ವ್ಯಾಕರಣದ ಮಾದರಿಯನ್ನು ಬಹಳ ದೀರ್ಘಕಾಲದಿಂದ ಕಾಪಾಡಿಕೊಂಡಿದೆ.
ಅದರಿಂದ ಭಿನ್ನವಾಗುವ ಎಲ್ಲ ಪ್ರಯತ್ನಗಳನ್ನೂ ಭಾಷೆಗೆ ಒದಗಿದ ಅಪಾಯವೆಂದೇ ತಿಳಿಯಲಾಗುತ್ತದೆ. ಈ ವಿವಾದವು
ಕೇವಲ ಭಾಷೆಯನ್ನು ವಿಶ್ಲೇಷಣೆ ಮಾಡುವ ಮಾದರಿಗಳಿಗೆ ಸಂಬಂಧಿಸಿದ್ದಲ್ಲ. ಬದಲಾಗಿ, ಭಾಷೆಯು ಹೀಗೆಯೇ
ಇರಬೇಕು ಎಂದು ಹಟಹಿಡಿಯುವ ವಿಧಾಯಕ ವ್ಯಾಕರಣಗಳು, ಸಮಾಜದಲ್ಲಿ ಆಗುತ್ತಿರುವ ಚಲನವಲನಗಳನ್ನು ಗಮನಿಸುವುದಿಲ್ಲ.
ಇದರಿಂದ, ಮೇಲುಮುಖವಾದ ಚಲನೆಯಲ್ಲಿ ತೊಡಗಿಕೊಂಡಿರುವ
ಹಿಂದುಳಿದ ವರ್ಗಗಳವರಿಗೆ, ಭಾಷೆ ಮತ್ತು ಶಿಕ್ಷಣಗಳ ಪ್ರಧಾನಧಾರೆಯನ್ನು ಸೇರಿಕೊಳ್ಳುವುದು ಕಷ್ಟವಾಗುತ್ತದೆ.
ಸರಿ-ತಪ್ಪುಗಳನ್ನು ವಿಧಿಸುವ ಈ ಆಲೋಚನೆಗಳು, ಸಂಸ್ಕೃತದಿಂದ ತುಂಬಿಹೋಗಿರುವ ಪ್ರಮಾಣಭಾಷೆಯನ್ನು ಹುಟ್ಟಿಸುವುದರ
ಕಡೆಗೆ, ಒಲವು ತೋರಿಸುತ್ತವೆ. ಇದರಿಂದ ಸಾಮಾನ್ಯ ಮನುಷ್ಯನು, ಪಂಡಿತರ ಲೋಕದೊಳಗೆ ಹೋಗುವುದು ಕಷ್ಟವಾಗುತ್ತದೆ.
ಅವನ ಒಳಜಗತ್ತು ಮತ್ತು ಹೊರಜಗತ್ತು ಎರಡೂ ಆ ಭಾಷೆಯ ಬುದ್ಧಿಲೋಕದ ಭಾಗವಾಗುವ ಅವಕಾಶವನ್ನು ಪಡೆಯುವುದೇ
ಇಲ್ಲ. ಇಂದಿನ ಸನ್ನಿವೇಶದಲ್ಲಿ ಇಂಗ್ಲಿಷ್ ಕೂಡ ಇದೇ ಬಗೆಯ ಕೆಲಸವನ್ನು ಮಾಡುತ್ತಿದೆಯೆಂಬ ವಿಷಯವನ್ನು
ನಾವು ತಿಳಿದುಕೊಳ್ಳಬೇಕು.
ಆದ್ದರಿಂದ, ಧ್ವನಿಶಾಸ್ತ್ರ, ಧ್ವನಿಮಾಶಾಸ್ತ್ರ, ಪದರಚನೆ, ವಾಕ್ಯರಚನೆ
ಮತ್ತು ಅರ್ಥರಚನೆಗಳೆಂಬ ಎಲ್ಲ ಹಂತಗಳಲ್ಲಿಯೂ ಕನ್ನಡ ಭಾಷೆಯ ವ್ಯಾಕರಣವನ್ನು ಮರಳಿ ಕಟ್ಟುವ ಆವಶ್ಯಕತೆಯಿದೆ.
ದ್ರಾವಿಡಭಾಷೆಗಳ ಪರಂಪರೆಯ ಹಿನ್ನೆಲೆಯಲ್ಲಿ, ಕನ್ನಡದ ಬೆಳವಣಿಗೆಯ ಬೇರೆ ಬೇರೆ ಮೆಟ್ಟಿಲುಗಳನ್ನು ಮತ್ತೆ
ಕಂಡುಕೊಳ್ಳಬೇಕಾಗಿದೆ. ಆದರೆ, ಸಂಸ್ಕೃತದಿಂದ ಬಂದಿರುವ, ಕನ್ನಡಕ್ಕೆ ಅಸಹಜವಾದ ಮಾದರಿಗಳು ಮತ್ತು ವಿವರಣೆಗಳ
ಭಾರವನ್ನು ಕಳೆದುಕೊಂಡ ಹೊಸ ಕನ್ನಡ ವ್ಯಾಕರಣಗಳನ್ನು ಕಟ್ಟುವುದು ಅದಕ್ಕಿಂತ ಮುಖ್ಯ. ಉದಾಹರಣೆಗೆ ಸಂಧಿ,
ಸಮಾಸಗಳಿಗೆ ಸಂಬಂಧ ಪಟ್ಟ ನಿಯಮಗಳನ್ನು ಸಾಕಷ್ಟು ಬದಲಾಯಿಸುವ ಅಗತ್ಯವಿದೆ. ಹಾಗೆಯೇ ಬೇರೆ ಭಾಷೆಯ ಪದಗಳು
ಕನ್ನಡಕ್ಕೆ ಬಂದಾಗ ಆಗುವ ಬದಲಾವಣೆಗಳ ನಿಜವಾದ ಸ್ವರೂಪವನ್ನು ಕಂಡುಕೊಳ್ಳಬೇಕು. ಇದೇ ಮಾತು ಲಿಂಗ,
ವಚನ ಮತ್ತು ವಿಭಕ್ತಿಗಳಂತಹ ವಿಷಯಗಳಿಗೂ ಅನ್ವಯಿಸುತ್ತದೆ. ಇದೆಲ್ಲ ಸಾಧ್ಯವಾಗಲು ರಾಜಕೀಯವಾಗಿ ಮತ್ತು
ಸಾಮಾಜಿಕವಾಗಿ ಗಟ್ಟಿ ಮನಸ್ಸು ಮಾಡುವ ಅಗತ್ಯವಿದೆ.
ಮೇಲೆ ಹೇಳಿದ ಎಲ್ಲ ಹಂತಗಳಲ್ಲಿಯೂ ಅನೇಕ ಸಮಸ್ಯೆಗಳಿವೆ. ಈ ವಿಷಯವನ್ನು
ಸ್ಪಷ್ಟಪಡಿಸಲು ಕನ್ನಡ ವರ್ಣಗಳ ಹಂತವನ್ನು ನೋಡೋಣ.
ಪಾರಂಪರಿಕವಾಗಿ ಕನ್ನಡದಲ್ಲಿ 14 ಸ್ವರಗಳು, ಎರಡು ಯೋಗವಾಹಗಳು
ಮತ್ತು 34 ವ್ಯಂಜನಗಳು ಇವೆಯೆಂದು ಹೇಳಲಾಗಿದೆ. ಒಟ್ಟು 50 ವರ್ಣಗಳಾದವು. ಆದರೆ, ತಮಿಳು ಭಾಷೆಯು ಮಹಾಪ್ರಾಣಗಳನ್ನು
ಬಳಸುವುದೇ ಇಲ್ಲ. ‘ಐ’
ಮತ್ತು ‘ಔ’
ಗಳನ್ನು ‘ಅಯ್’
ಮತ್ತು ‘ಅವ್’
ಎಂದು ಉಚ್ಚರಿಸಲು ಸಾಧ್ಯ. ‘ಋ’
ಮತ್ತು ಅದರ ದೀರ್ಘ ರೂಪಗಳು ಅಚ್ಚಕನ್ನಡ ಪದಗಳಲ್ಲಿ ಕಂಡುಬರುವುದಿಲ್ಲ. ಕಂಠ್ಯ ಮತ್ತು ತಾಲವ್ಯ ಅನುನಾಸಿಕಗಳನ್ನು(ಙ
ಮತ್ತು ಞ) ಉಪಧ್ವನಿಗಳಾಗಿ ಬಳಸಬಹುದು. ಮಹಾಪ್ರಾಣಗಳ ಮಾತೂ ಹಾಗೆಯೇ. ಅವು ಕಾಣಿಸಿಕೊಳ್ಳುವುದು ಸಂಸ್ಕೃತದಿಂದ
ಬಂದಿರುವ ಪದಗಳಲ್ಲಿ. ಹಾಗೆಯೇ ಆಡುಮಾತಿನಲ್ಲಿ ‘ಶ’ ಮತ್ತು ‘ಷ’ ಗಳ ವ್ಯತ್ಯಾಸವು ಸಾಮಾನ್ಯವಾಗಿ ಕೇಳುವುದಿಲ್ಲ. ಇದೆಲ್ಲವನ್ನೂ
ಗಮನಕ್ಕೆ ತೆಗೆದುಕೊಂಡು ಮೂಲ ಕನ್ನಡ ವರ್ಣಮಾಲೆಯಲ್ಲಿ ಕೇವಲ 31 ವರ್ಣಗಳಿದ್ದವೆಂದು ಹೇಳಬಹುದು. ಸಹಜವಾಗಿಯೇ
ಈ ವಾದವು ಬಿಸಿಬಿಸಿಯಾದ ಚರ್ಚೆಗೆ ಎಡೆ ಮಾಡುತ್ತದೆ. ತಾತ್ವಿಕ ಸಂಗತಿಗಳು ಹಿನ್ನೆಲೆಗೆ ಸರಿಯುತ್ತವೆ.
ಕನ್ನಡದ ಪದರಚನೆ, ವಾಕ್ಯರಚನೆ ಮತ್ತು ಅರ್ಥರಚನೆಗೆ ಸಂಬಂಧಿಸಿದ ವಿಷಯಗಳ ಮರುರಚನೆಯೂ ಇಂತಹುದೇ ವಿವಾದಗಳಿಗೆ
ದಾರಿಯಾಗುತ್ತದೆ. ಇದು ಕೇವಲ ವಿಧಾಯಕ ಮತ್ತು ವರ್ಣನಾತ್ಮಕ ವ್ಯಾಕರಣಗಳ ಪ್ರಶ್ನೆಯಲ್ಲ. ಬದಲಾಗಿ ಈ
ಸಮಸ್ಯೆಗಳಿಗೆ ಇರುವ ಸಾಮಾಜಿಕ-ಭಾಷಿಕ ನೆಲೆಗಳನ್ನು ನಾವು ಗಮನಿಸಬೇಕಾಗಿದೆ.
ಮುಂದಿನ ಓದು:
- ‘ಕನ್ನಡ ಮಧ್ಯಮ ವ್ಯಾಕರಣ’,
ತೀ.ನಂ. ಶ್ರೀಕಂಠಯ್ಯ, 1939, ಮೈಸೂರು
- ‘ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ’, ಡಿ.ಎನ್. ಶಂಕರ ಭಟ್, 2000, ಭಾಷಾಪ್ರಕಾಶನ, ಮೈಸೂರು.
- ‘ವ್ಯಾಕರಣಶಾಸ್ತ್ರದ ಪರಿವಾರ’,
ಎನ್. ರಂಗನಾಥಶರ್ಮ, 2002, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ.
- ‘ಕನ್ನಡ ಭಾಷೆಯ ಕಲ್ಪಿತ ಚರಿತ್ರೆ’,
ಡಿ.ಎನ್. ಶಂಕರ ಭಟ್, 1995, ಕನ್ನಡ ವಿಶ್ವವಿದ್ಯಾಲಯ, ಹಂಪಿ.
- ‘ಕನ್ನಡ ವ್ಯಾಕರಣ ಪರಂಪರೆ’,
ಡಿ.ಎನ್. ಶಂಕರ ಭಟ್, ಕನ್ನಡ ವಿಶ್ವವಿದ್ಯಾಲಯ, ಹಂಪಿ.
- ‘ಕನ್ನಡ ಜಗತ್ತು:
ಅರ್ಧ ಶತಮಾನ’, ಕೆ.ವಿ. ನಾರಾಯಣ, 2007, ಕನ್ನಡ ವಿಶ್ವವಿದ್ಯಾಲಯ,
ಹಂಪಿ.
- ‘A Generative Grammar of Kannada’, A.K. Ramanujan,
1962, Indiana University,
U.S.A.
- ‘Kannada: Descriptive Grammar’, S.N. Sridhar,
1992, Routledge
- ‘A Case Grammar of Kannada’, P.P. Giridhar, Central
Institute of Indian Languages, Mysore
-
Kannada
grammar - Wikipedia,
the free encyclopedia
|